1. ದೇವರ ಬಗೆಗಿನ ನಂಬಿಕೆ ಅನಾದಿಕಾಲದಿಂದಲೂ ಮನುಷ್ಯನಲ್ಲಿ ಮೂಡಿಬಂದಿದೆ.

2. ಇಡೀ ಜಗತ್ತು ದೇವರ ಸೃಷ್ಟಿ ಎಂಬ ಪ್ರತಿಪಾದನೆ ಕೆಲವರದಾದರೆ, ಮಾನವನ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ದೇವರೆಂಬ ನಂಬಿಕೆಯನ್ನು ಮನುಷ್ಯನೇ ಹುಟ್ಟು ಹಾಕಿದ್ದಾನೆಂದು ಕೆಲವರ ಅಭಿಪ್ರಾಯ.

3. ದೇವರ ಬಗ್ಗೆ ನಂಬಿಕೆ ಉಳ್ಳವರನ್ನು ಆಸ್ತಿಕರು ಎಂದು ಕರೆಯುತ್ತಾರೆ.

4. ದೇವರನ್ನು ನಂಬದವರು ನಾಸ್ತಿಕರು.

5. ದೇವರು ಅವರವರ ಮತ, ಆಚಾರ, ವಿಚಾರಗಳ ಅಡಿಯಲ್ಲಿ ಒಬ್ಬನೇ ಆಗಿರಬಹುದು ಅಥವಾ ಹಲವು ದೇವರ ಆರಾಧನೆಯನ್ನೂ ಮಾಡುವ ಪದ್ಧತಿ ಹೊಂದಿರಬಹುದು.

6. ಹಾಗೆಯೇ ದೇವರಿಗೆ ವಿವಿಧ ರೀತಿಯ ಆಕಾರಗಳನ್ನು ನೀಡಿ ಪೂಜಿಸುವ ಸಂಸ್ಕೃತಿ ಕೆಲವರದಾದರೆ, ಮತ್ತೆ ಕೆಲವು ಪದ್ಧತಿಗಳಲ್ಲಿ ದೇವರಿಗೆ ಯಾವುದೇ ಆಕಾರವಿರುವುದಿಲ್ಲ.

7. ದೇವರಿಗೆ ಆಕಾರ, ಬಣ್ಣ, ರೂಪಗಳನ್ನು ನೀಡಿ ವಿಗ್ರಹಗಳಿಗೆ ಆವಾಹಿಸಿ ಪೂಜಿಸುವ ಪದ್ಧತಿಯನ್ನು ವಿಗ್ರಹಾರಾಧನೆ ಎಂದು ಕರೆಯುತ್ತಾರೆ.

8. ದೇವನೊಬ್ಬ ನಾಮ ಹಲವು ಎಂದು ನಂಬಿ ಹಲವಾರು ರೂಪಗಳಲ್ಲಿ ದೇವರನ್ನು ಪೂಜಿಸಿಕೊಂಡು ಬರುತ್ತಿರುವ ಸಂಸ್ಕೃತಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿದೆ.

9. ಹಲವರಿಗೆ ಬಂಧುವಾಗಿ, ತಾಯಿಯಾಗಿ, ಸಖನಾಗಿ, ಮಗುವಾಗಿ, ದಾರಿ ತೋರುವ ಗುರುವಾಗಿ ದೇವರು ಕಂಡುಬರುತ್ತಾನೆ.

10. ದೇವರನ್ನೇ ತಾಯಿಯಾಗಿ, ಜಗತ್ತಿನ ಸೃಷ್ಟಿಗೆ ಕಾರಣಳಾದ ಆದಿಪರಾಶಕ್ತಿಯಾಗಿ ಪೂಜಿಸುವ ಮಾರ್ಗವನ್ನು ಶಾಕ್ತಪಂಥದವರು ಪಾಲಿಸುತ್ತಾರೆ.

11. ಶಿವನನ್ನು ಪೂಜಿಸುವವರು ಶೈವರು.

12. ವಿಷ್ಣುವನ್ನು ನಂಬಿ ಅವನೇ ಸರ್ವಶ್ರೇಷ್ಠ ಎಂದು ಪ್ರತಿಪಾದಿಸುವವರನ್ನು ವೈಷ್ಣವರು ಎಂದು ಕರೆಯಲಾಗುತ್ತದೆ.

13. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂಬಂತೆ ಯಾವುದೇ ಪೂಜಾ ಪದ್ಧತಿ ಇರಲಿ ಅದು ಸರ್ವಶಕ್ತನಾದ ಭಗವಂತನ ಆರಾಧನೆಯೇ ಆಗಿರುತ್ತದೆ.

14. "ಸರ್ವ ದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ" ಎಂಬ ಸಂಸ್ಕೃತ ಸುಭಾಷಿತದಂತೆ ನಮ್ಮ ನಮ್ಮ ನಂಬಿಕೆ ಯಾವುದೇ ಆಗಿದ್ದರೂ ನಾವು ಮಾಡುವ ಪೂಜೆಯ ಉದ್ದೇಶ ಕೊನೆಯಲ್ಲಿ ಭಗವಂತನಿಗೆ ಮಾಡುವ ಸಮರ್ಪಣೆಯೇ ಆಗಿರುತ್ತದೆ ಎಂಬುದು ಸರ್ವವಿದಿತ.

15. ಈ ಹಿನ್ನಲೆಯಲ್ಲಿ "ಶಿವ ದೊಡ್ಡವ, ಕೇಶವನು ಉತ್ತಮ" ಎಂದು ನಮ್ಮನಮ್ಮಲ್ಲೇ ಭೇದ ಭಾವ ಮಾಡುವುದರಿಂದ ಕೇವಲ ನಮ್ಮ ನಮ್ಮ ಪಾಂಡಿತ್ಯ ಪ್ರದರ್ಶನವಾಗುತ್ತದೆಯೇ ಹೊರತು ಇನ್ನಾವ ಸಾಧನೆಯೂ ಸಾಧ್ಯವಾಗುವುದಿಲ್ಲ.

16. ದೇವರ ಮೇಲಿನ ನಂಬಿಕೆ, ಆಚರಣೆಗಳು ನಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ, ಆದರ್ಶ ಜೀವನವನ್ನು ನಡೆಸುವಲ್ಲಿ ಸಹಾಯ ಮಾಡಬೇಕೇ ಹೊರತು, ಅದರಿಂದ ತನಗೆ, ಇತರರಿಗೆ ಯಾವುದೇ ರೀತಿಯ ತೊಂದರೆ ಆಗುತ್ತಿದ್ದಲ್ಲಿ ಅಥವಾ ಹಿಂಸೆ ಆಗುತ್ತಿದ್ದಲ್ಲಿ ಅದನ್ನು ನಿಜವಾದ ದೇವರ ಪೂಜೆ ಎಂದು ಕರೆಯಲು ಸಾಧ್ಯವಿಲ್ಲ.

17. ದೇವರ ಪೂಜೆಯ ಹೆಸರಿನಲ್ಲಿ ತನಗೆ ಅಥವಾ ಇತರರಿಗೆ ತೊಂದರೆ ಉಂಟುಮಾಡುವುದು ಕೇವಲ ಡಂಭಾಚಾರವೇ ಹೊರತು ಅದರಿಂದ ಪರಮಾತ್ಮನ ಸಾಕ್ಷಾತ್ಕಾರ ಖಂಡಿತಾ ಸಾಧ್ಯವಿಲ್ಲ.

18. ಯಾವುದೇ ಪೂಜೆ, ಆಚರಣೆಗಳನ್ನೂ ಅತಿಯಾಗಿ ನಂಬದೇ ತನಗೆ ಬಂದ ಕರ್ಮಗಳನ್ನು ನಿಷ್ಠೆಯಿಂದ ಆಚರಿಸುತ್ತಾ ಧರ್ಮ ಮಾರ್ಗದಲ್ಲಿ ನಡೆಯುವುದೂ ಸಹ ಒಂದು ರೀತಿಯ ಭಗವಂತನ ಆರಾಧನೆಯೇ.

19. "ನಂಬಿ ಕೆಟ್ಟವರಿಲ್ಲವೋ" ಎಂಬ ದಾಸರ ನುಡಿಯಂತೆ ದೇವರು ಇದ್ದಾನೆಯೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿ ಸಮಯ ವ್ಯರ್ಥಮಾಡುವುದರ ಬದಲು, ನಮ್ಮ ನಮ್ಮ ದೇವರ ಬಗೆಗಿನ ನಂಬಿಕೆ ನಮಗೆಷ್ಟು ಧೈರ್ಯವನ್ನು, ನೆಮ್ಮದಿಯನ್ನು ನೀಡುತ್ತಿದೆ ಎಂಬುದರ ಅರಿವನ್ನು ಪಡೆದು ಮುನ್ನಡೆಯುವುದು ಮುಖ್ಯವೆನಿಸುತ್ತದೆ.

20. ಒಟ್ಟಾರೆ "ಏನಕೇನ ಪ್ರಕಾರೇಣ" ಎಂಬಂತೆ ದೇವರ ಹೆಸರಿನಲ್ಲಿ ಅಥವಾ ನಿಷ್ಕಾಮಕರ್ಮಾಚರಣೆಯನ್ನು ಮಾಡುತ್ತಾ ಧರ್ಮ ಮಾರ್ಗದಲ್ಲಿ ನಡೆಯುವುದು ನಿಜವಾಗಿಯೂ ಭಗವಂತನ ದರ್ಶನಕ್ಕೆ, ಅವನಿಗೆ ಹತ್ತಿರಾಗುವುದಕ್ಕೆ ಮತ್ತು ಇಹ ಪರಗಳಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳಲು ಇರುವ ಸಾಧನ ಎಂಬುದರಲ್ಲಿ ಸಂಶಯವಿಲ್ಲ.


ವಿಷಯ: ದೇವರು 

ಹೆಸರು: ಭಾಗ್ಯಶ್ರೀ ದತ್ತಾರಾಮ್

ಮೊಬೈಲ್ ನಂಬರ್: 9980274908